ಫೀನಿಕ್ಸ್ 2

ಅಮೆರಿಕ ಸಂಯುಕ್ತ ಸಂಸ್ಥಾನದ ಅರಿಜೋನ ರಾಜ್ಯದ ರಾಜಧಾನಿ. ಸಾಲ್ಟ್ ನದಿಯ ದಡದಲ್ಲಿ ಉ. ಅ. 33º 27', ಪ. ರೇ 112º 05' ಮೇಲೆ ಇದೆ. ಜನಸಂಖ್ಯೆ 764,911 (1980). ಸಾಲ್ಟ್ ನದಿಯ ನೀರಾವರಿ ಯೋಜನೆಗಳ ಮಧ್ಯದಲ್ಲಿರುವ ಈ ನಗರ ವಾಣಿಜ್ಯ ಕೇಂದ್ರ. ಹತ್ತಿ, ಧಾನ್ಯ, ಹಣ್ಣು, ತರಕಾರಿ ಮುಖ್ಯ ವಾಣಿಜ್ಯ ವಸ್ತುಗಳು. ಅಲ್ಯೂಮಿನಿಯಮ್ ಸರಕು ಮಾದಕ ಪಾನೀಯ, ಹವಾನಿಯಂತ್ರಣ ಉಪಕರಣ ಇವನ್ನು ತಯಾರಿಸುವ ಕಾರ್ಖಾನೆಗಳಿವೆ. ಗಣಿಗಾರಿಕೆ, ನಾಟಾ ಕೆಲಸ, ಪ್ರವಾಸೋದ್ಯಮ ಇವು ಇತರ ಆರ್ಥಿಕ ಚಟುವಟಿಕೆಗಳು. ಆರಿಜೋನ ರಾಜ್ಯದಲ್ಲಿ ಫೀನಿಕ್ಸ್ ಅತ್ಯಂತ ದೊಡ್ಡ ನಗರ. ಫೀನಿಕ್ಸ್ ಕಾಲೇಜು 1920ರಲ್ಲಿ ಸ್ಥಾಪಿತವಾಯಿತು. ಈಗ ಅಲ್ಲಿ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳುಂಟು. ಅರಿಜೋನ ರಾಜ್ಯವಿಶ್ವವಿದ್ಯಾಲಯದ ಕೇಂದ್ರ ಇದಕ್ಕೆ ಸಮೀಪದಲ್ಲಿರುವ ಟೆಂಪೀ ನಗರದಲ್ಲಿದೆ.

	ಪ್ರಾಚೀನ ಇಂಡಿಯನ್ ಅವಶೇಷಗಳ ಮೇಲೆ 1867ರಲ್ಲಿ ನಿರ್ಮಿತವಾದ ಈ ನಗರ ಒಮ್ಮೆ ಬೆಂಕಿಗೆ ತುತ್ತಾಗಿ ಮತ್ತೆ ನಿರ್ಮಿತವಾಯಿತು. ಆದ್ದರಿಂದಲೇ ಇದಕ್ಕೆ ಪೌರಾಣಿಕ ಫೀನಿಕ್ಸ್‍ಪಕ್ಷಿಯ ಹೆಸರು ಬಂದದ್ದು. 1881ರಲ್ಲಿ ಇದು ನಗರದ ಸ್ಥಾನಮಾನ ಪಡೆಯಿತು. 1889ರ ತನಕವೂ ಇದು ಪ್ರಾದೇಶಿಕ ರಾಜಧಾನಿಯಾಗಿತ್ತು. 1912ರಲ್ಲಿ ಅರಿಜೋನ ಒಕ್ಕೂಟಕ್ಕೆ ಸೇರಿದಾಗ ಆ ರಾಜ್ಯದ ರಾಜಧಾನಿಯಾಯಿತು.
(ಡಿ.ಎಸ್.ಜಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ